Breaking News

ದಸರಾ ಉತ್ಸವಕ್ಕೆ ಇಂದು ತೆರೆ : ವಿಶ್ವ ಪ್ರಸಿದ್ದ ಜಂಬೂಸವಾರಿಗೆ ಕ್ಷಣಗಣನೆ

 

ದಸರಾ ಉತ್ಸವಕ್ಕೆ ಇಂದು ತೆರೆ : ವಿಶ್ವ ಪ್ರಸಿದ್ದ ಜಂಬೂಸವಾರಿಗೆ ಕ್ಷಣಗಣನೆ


Mysuru Dasara 2020: ನವರಾತ್ರಿ ಉತ್ಸವದ ಕೊನೆಯ ದಿನವಾದ ಇಂದು ಮೈಸೂರು ಅರಮನೆಯಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಜಂಬೂಸವಾರಿಗೆ ಇಂದು ಮುಂಜಾನೆಯಿಂದಲೇ ಗಜಪಡೆಗೆ ಅಲಂಕಾರ ಆರಂಭಗೊಂಡಿದೆ.

ಮೈಸೂರು (ಅ. 26): ಕೊರೋನಾ ಭೀತಿಯ ನಡುವೆಯೂ ನಾಡಿನಾದ್ಯಂತ ನವರಾತ್ರಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಕೂಡ ಈ ಬಾರಿ ಸರಳವಾಗಿ ಆಚರಿಸಲಾಗಿದೆ. ನವರಾತ್ರಿಯ ಕೊನೆಯ ದಿನವಾದ ಇಂದು ಮೈಸೂರು ಅರಮನೆಯಲ್ಲಿ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ವಿಜಯದಶಮಿಯಂದು ಮೈಸೂರಿನಲ್ಲಿ ನಡೆಯುವ ಜಂಬೂಸವಾರಿ ವೀಕ್ಷಿಸಲು ಪ್ರತಿವರ್ಷ ದೇಶ-ವಿದೇಶಗಳಿಂದ ಸಾವಿರಾರು ಜನರು ಬರುತ್ತಿದ್ದರು. ಆದರೆ, ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಕೇವಲ 300 ಜನ ಗಣ್ಯರಿಗೆ, ಆಹ್ವಾನಿತರಿಗೆ ಮಾತ್ರ ಜಂಬೂಸವಾರಿ ವೀಕ್ಷಿಸಲು ಅವಕಾಶ ನೀಡಲಾಗಿದೆ. ಅಂಬಾ ವಿಲಾಸ ಅರಮನೆಯ ಮುಂಭಾಗದಲ್ಲಿಯೇ ಇಂದು ಜಂಬೂಸವಾರಿ ನಡೆಯಲಿದೆ. ಪ್ರತಿವರ್ಷ ಮೈಸೂರಿನ ರಸ್ತೆಗಳಲ್ಲಿ ಸಾಗುತ್ತಿದ್ದ ಜಂಬೂಸವಾರಿ ಈ ಬಾರಿ ಅರಮನೆ ಆವರಣಕ್ಕೆ ಸೀಮಿತವಾಗಿದೆ. ಇಂದು ಮಧ್ಯಾಹ್ನ 3.40ರಿಂದ ಸಂಜೆ 4.15ರೊಳಗೆ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಲಿದೆ.

 


ಇಂದು ಅರ್ಜುನ ಆನೆಯ ಬದಲು ಅಭಿಮನ್ಯು ಮೊದಲ ಬಾರಿಗೆ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಇಂದಿನ ಜಂಬೂ ಸವಾರಿಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವೀಕ್ಷಿಸಲಿದ್ದಾರೆ. ಮಧ್ಯಾಹ್ನ 2.59ರಿಂದ 3.20ರೊಳಗಿನ ಮುಹೂರ್ತದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ಬಳಿಕ 3.40ರಿಂದ ಜಂಬೂಸವಾರಿ ಶುರುವಾಗಲಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿಯ ಜಂಬೂಸವಾರಿಯ ಸಂಭ್ರಮವನ್ನು ಟಿವಿ, ವಾರ್ತಾ ಇಲಾಖೆಯ ಫೇಸ್​ಬುಕ್​ ಪೇಜ್​ನಲ್ಲಿ ಕಣ್ತುಂಬಿಕೊಳ್ಳಬಹುದು.

ಜಂಬೂಸವಾರಿಗೆ ದಸರಾ ಗಜಪಡೆ ಸಿದ್ಧವಾಗುತ್ತಿವೆ. ಇಂದು ಮುಂಜಾನೆಯಿಂದಲೇ ಗಜಪಡೆಗೆ ಅಲಂಕಾರ ಆರಂಭಗೊಂಡಿದ್ದು, ಆನೆಗಳ ಮೈಮೇಲೆ ಕಲಾವಿದರು ಚಿತ್ರಕಲೆ ಬಿಡಿಸುತ್ತಿದ್ದಾರೆ. ಹುಣಸೂರಿನ‌ ನಾಗಲಿಂಗಪ್ಪ ತಂಡದ 4 ಜನರಿಂದ ದಸರಾ ಆನೆಗಳಿಗೆ ಅಲಂಕಾರ ಮಾಡಲಾಗುತ್ತಿದೆ. ಅಂಬಾರಿ ಹೊರಲಿರುವ ಅಭಿಮನ್ಯು, ಆತನ ಜೊತೆಗೆ ಜಂಬೂಸವಾರಿಯಲ್ಲಿ ಹೆಜ್ಜೆ ಹಾಕಿರುವ ಆನೆಗಳಾದ ಗೋಪಿ, ವಿಕ್ರಮ, ಕಾವೇರಿ, ವಿಜಯ ಆನೆಗಳಿಗೆ ಅಲಂಕಾರ ಮಾಡಲಾಗುತ್ತಿದೆ.

ಇಂದು ಮೈಸೂರು ಅರಮನೆಯಲ್ಲಿ ದಸರಾ ಜಂಬೂಸವಾರಿ ಇರುವುದರಿಂದ 300 ಮಂದಿ ಆಹ್ವಾನಿತರನ್ನು ಕಾಯಲು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅಂಬಾವಿಲಾಸ ಅರಮನೆ ಎದುರು ನಡೆಯಲಿರುವ ಮೆರವಣಿಗೆ ವೀಕ್ಷಣೆ ಮಾಡಲು ಕೇವಲ 300 ಮಂದಿಗೆ ಅವಕಾಶ ನೀಡಲಾಗಿದೆ. ಈ 300 ಮಂದಿ ಕಾಯಲು ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಅರಮನೆ ಆವರಣ ಸೇರಿದಂತೆ ಅರಮನೆಯ ಸುತ್ತ ಭದ್ರತೆ ಒದಗಿಸಲಾಗಿದೆ. ನಿನ್ನೆ ಮೈಸೂರು ರಾಜಮನೆತನದಿಂದ ಸಾಂಪ್ರದಾಯಿಕವಾಗಿ ಆಯುಧ ಪೂಜೆ ನೆರವೇರಿಸಲಾಗಿದೆ. ಯದುವಂಶದ ಮಹಾರಾಜ ಯದುವೀರ್ ಒಡೆಯರ್‌ ಅವರಿಂದ ಆಯುಧ ಪೂಜೆ ನೆರವೇರಿಸಲಾಗಿದೆ. ಅರಮನೆಯ ಕಲ್ಯಾಣಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ ನೆರವೇರಿಸಿ, ಸವಾರಿ ತೊಟ್ಟಿಯಲ್ಲಿ ಅರಮನೆಯ ವಾಹನಗಳು ಹಾಗೂ ಪ್ರಾಣಿಗಳಿಗೆ ಪೂಜೆ ಮಾಡಲಾಗಿತ್ತು.

ದಸರಾ ಜಂಬೂಸವಾರಿ ಮೆರವಣಿಗೆಗೆ ಮೈಸೂರು ಅರಮನೆ ಅಂಗಳ ಸಿದ್ಧವಾಗಿದೆ. ಈ‌ ಬಾರಿ 300 ಮೀಟರ್​ವರೆಗೆ ಮಾತ್ರ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಮೆರವಣಿಗೆಯಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಕೊರೊನಾ ವಾರಿಯರ್ ಸ್ತಬ್ದ ಚಿತ್ರ ಪ್ರದರ್ಶನ ಮಾಡಲಾಗುವುದು. ದಸರಾ ಜಂಬೂಸವಾರಿಯಲ್ಲಿ ಎರಡೇ ಎರಡು ಸ್ತಬ್ದ ಚಿತ್ರ ಪ್ರದರ್ಶನವಾಗಲಿದೆ. ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯಿಂದ ಸ್ತಬ್ದ ಚಿತ್ರ ನಿರ್ಮಾಣ ಮಾಡಲಾಗಿದ್ದು, ಕೊರೊನಾ ವಾರಿಯರ್ ಹಾಗೂ ಕೊರೊನಾ‌ ಬಗ್ಗೆ ಅರಿವು ಮೂಡಿಸುವ ಸ್ತಬ್ದ ಚಿತ್ರ ಹಾಗೂ ಅರಮನೆಯ ಸಾಂಪ್ರದಾಯಿಕ ಶೈಲಿಯ ಆನೆ ಗಾಡಿ ಸ್ತಬ್ದ ಚಿತ್ತ ನಿರ್ಮಾಣ ಮಾಡಲಾಗಿದೆ. ಪೊಲೀಸ್ ಬ್ಯಾಂಡ್ ಕುಳಿತು ವಾದ್ಯಗೋಷ್ಠಿ ನುಡಿಸಲು ನಿರ್ಮಿಸಲಾಗಿದೆ.

ಕಾಮೆಂಟ್‌ಗಳಿಲ್ಲ