Breaking News

FDI ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿಯೆ ಕರ್ನಾಟಕ ನಂ.1

 FDI ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ದೇಶದಲ್ಲಿಯೆ ಕರ್ನಾಟಕ ನಂ.1

ಬೆಂಗಳೂರು : ಕರೊನಾ ಮಾರಕ ಪಿಡುಗಿನಿಂದಾಗಿ ಉದ್ಯಮ-ವಹಿವಾಟು ಕುಸಿತ, ಆರ್ಥಿಕ ಮುಗ್ಗಟ್ಟಿನ ನಿರುತ್ಸಾಹ ಸನ್ನಿವೇಶದಲ್ಲೂ ಹೂಡಿಕೆ ಸ್ನೇಹಿ ರಾಜ್ಯವೆಂಬ ಹೆಗ್ಗಳಿಕೆಯನ್ನು ಕರ್ನಾಟಕ ಉಳಿಸಿಕೊಂಡಿದೆ. ಅಷ್ಟೇಅಲ್ಲ, ವಿದೇಶಿ ನೇರ ಬಂಡವಾಳ (ಎಫ್​ಡಿಐ) ಆಕರ್ಷಣೆಯಲ್ಲಿ ದೇಶದಲ್ಲಿಯೆ ನಂ.1 ಆಗಿ ಹೊರ ಹೊಮ್ಮಿದೆ.

ಸುಗಮ ವ್ಯವಹಾರ, ಕೈಗಾರಿಕೆಗಳು ತ್ವರಿತ ಕಾರ್ಯಾರಂಭಕ್ಕೆ ಪೂರಕ ಉಪಕ್ರಮಗಳು, ಬಿಗಿ ಕಾಯ್ದೆಗೆ ತಿದ್ದುಪಡಿ, ನಿಯಮಗಳು ಸಡಿಲ, ವಿನಾಯಿತಿ ಜತೆಗೆ ಹೊಸ ಕೈಗಾರಿಕೆ ನೀತಿ ಜಾರಿಗೆ ತಂದಿರುವುದರ ಫಲವಾಗಿ ಮುಂದಿನ ದಿನಗಳನ್ನು ಇನ್ನಷ್ಟು ಆಶಾದಾಯಕಗೊಳಿಸಿದೆ. ದೇಶದಲ್ಲಿಯೇ ಅತಿ ಹೆಚ್ಚು ಎಫ್​ಡಿಐ ಅನ್ನು ರಾಜ್ಯ ಆಕರ್ಷಿಸಿದ್ದರ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರಣಿ ಟ್ವೀಟ್​ಗಳ ಮೂಲಕ ಮಾಹಿತಿ ಹಂಚಿಕೊಂಡು, ಸಂತಸ ವ್ಯಕ್ತಪಡಿಸಿದ್ದಾರೆ.

ಅಗಾಧ ಹೂಡಿಕೆ: ಪ್ರಸಕ್ತ ಆರ್ಥಿಕ ವರ್ಷದ (2020-21) ಏಪ್ರಿಲ್-ಜೂನ್ ತ್ರೖೆಮಾಸಿಕದಲ್ಲಿ 10,255 ಕೋಟಿ ರೂ. ವಿದೇಶಿ ಬಂಡವಾಳ ರಾಜ್ಯಕ್ಕೆ ಹರಿದು ಬಂದಿದೆ. ಕರೊನಾ- ಲಾಕ್​ಡೌನ್ ಅವಧಿಯಲ್ಲಿ ದೇಶದಲ್ಲೇ ಅತಿ ಹೆಚ್ಚು ಎಫ್​ಡಿಐ ಲಭ್ಯವಾಗಿದ್ದು, ಹೂಡಿಕೆದಾರರಿಗೆ ಕರ್ನಾಟಕ ನೆಚ್ಚಿನ ಮತ್ತು ಆದ್ಯತೆಯ ತಾಣವಾಗಿದೆ. ದೇಶದ ಮೊದಲ ನಿರ್ದಿಷ್ಟ ವಲಯವಾದ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಸರಕುಗಳ ಕ್ಲಸ್ಟರ್ ಹುಬ್ಬಳ್ಳಿಯಲ್ಲಿ 3,540 ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ತಲೆ ಎತ್ತಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ್ ಭಾರತ’ ಪರಿಕಲ್ಪನೆಗೆ ಅನುಗುಣವಾಗಿ ವಿಶ್ವ ದರ್ಜೆಯ ಸವಲತ್ತು ದೊರೆಯಲಿದ್ದು, 20 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬಿಎಸ್​ವೈ ತಿಳಿಸಿದ್ದಾರೆ.


ನವೋದ್ಯಮದಲ್ಲೂ ಮುಂಚೂಣಿ: ಅಭಿವೃದ್ಧಿಗೆ ಪೂರಕವಾಗಿರುವ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸುತ್ತಲೆ ಬಂದಿದೆ. ಉಪಗ್ರಹ ತಂತ್ರಜ್ಞಾನ, ಸಾವಯವ ಕೃಷಿ, ಆಗ್ಮೆಂಟೆಡ್ ರಿಯಾಲಿಟಿ ಮೊದಲ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ರಾಜ್ಯ ರಾಷ್ಟ್ರಮಟ್ಟದ ಗಮನಸೆಳೆದಿದೆ. ವಿವಿಧ ಆವಿಷ್ಕಾರ, ನವೀನ ತಂತ್ರಜ್ಞಾನ ಬಳಕೆ ಮೂಲಕ ರಾಜ್ಯದ 15 ನವೋದ್ಯಮಗಳು ರಾಷ್ಟ್ರೀಯ ನವೋದ್ಯಮ ಪ್ರಶಸ್ತಿ ಗೆದ್ದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಹೆಸರು ಪಡೆದ ಬೆಂಗಳೂರು ಜತೆಗೆ 2 ಮತ್ತು 3ನೇ ಹಂತದ ನಗರಗಳಲ್ಲಿ ಉದ್ಯಮಗಳನ್ನು ನೆಲೆಗೊಳಿಸಲು ಸರ್ಕಾರ ಒತ್ತು ನೀಡಿದೆ. ದಾವೋಸ್ ವಿಶ್ವ ಆರ್ಥಿಕ ಶೃಂಗ ಸೇರಿ ರಾಷ್ಟ್ರ, ಅಂತಾರಾಜ್ಯ ವೇದಿಕೆಗಳಲ್ಲಿ ಉತ್ತಮ ರೀತಿಯಲ್ಲಿ ಬಿಂಬಿಸಿ, ಪ್ರತಿಷ್ಠಿತ ಉದ್ಯಮಿಗಳಿಗೆ ಮುಕ್ತ ಆಹ್ವಾನ, ಬಂಡವಾಳ ಹೂಡಿಕೆಗೆ ಕೊಡ ಮಾಡಲಿರುವ ಸವಲತ್ತುಗಳನ್ನು ಮನವರಿಕೆ ಮಾಡಿಕೊಟ್ಟಿದೆ.

ಕಾಮೆಂಟ್‌ಗಳಿಲ್ಲ