Breaking News

Smart City : ಸ್ಮಾರ್ಟ್ ಸಿಟಿ ಮೂಲಸೌಕರ್ಯ ಯೋಜನೆಗಳು; ಹೂಡಿಕೆಗೆ ಆಕರ್ಷಣೆ : ಪ್ರಧಾನಿ ಮೋದಿ

Smart City : ಸ್ಮಾರ್ಟ್ ಸಿಟಿ  ಮೂಲಸೌಕರ್ಯ ಯೋಜನೆಗಳು; ಹೂಡಿಕೆಗೆ ಆಕರ್ಷಣೆ : ಪ್ರಧಾನಿ ಮೋದಿ

ಭಾರತದ 27 ನಗರಗಳಲ್ಲಿ ನಡೆಯುತ್ತಿರುವ ಮೆಟ್ರೋ ರೈಲು ಯೋಜನೆಗಳು, 100 ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಲಕ್ಷಾಂತರ ಕೋಟಿ ಮೌಲ್ಯದ ಕಾಮಗಾರಿಗಳನ್ನ ಉಲ್ಲೇಖಿಸಿ ಪ್ರಧಾನಿ ಮೋದಿ ಅವರು ಹೂಡಿಕೆದಾರರನ್ನು ಆಕರ್ಷಿಸಲು ಯತ್ನಿಸಿದ್ದಾರೆ.

ನವದೆಹಲಿ(ನ. 18): ಕೊರೋನಾ ವೈರಸ್ ಪಿಡುಗಿನಿಂದ ಚೇತರಿಸಿಕೊಂಡು ಆರ್ಥಿಕತೆಯ ಪುನರ್ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವ ಭಾರತದಲ್ಲಿ ಬಂಡವಾಳ ಹೂಡಿಕೆಗೆ ವಿಪುಲ ಅವಕಾಶಗಳಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮೂರನೇ ವಾರ್ಷಿಕ ಬ್ಲೂಮ್​ಬರ್ಗ್ ನ್ಯೂ ಎಕನಾಮಿ ಫೋರಂ ಅನ್ನು ಉದ್ದೇಶಿಸಿ ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಮಾತನಾಡಿದ ಪ್ರಧಾನಿಗಳು, ದೇಶದ ನಗರ ಪ್ರದೇಶಗಳಲ್ಲಿ ಬಂಡವಾಳ ಹಾಕುವಂತೆ ಹೂಡಿಕೆದಾರರಿಗೆ ಕರೆ ನೀಡಿದರು. “ನೀವು ನಗರೀಕರಣ ಕಾರ್ಯಗಳಿಗೆ ಹೂಡಿಕೆ ಮಾಡುವ ಉದ್ದೇಶ ಹೊಂದಿದ್ದರೆ ಭಾರತದಲ್ಲಿ ಆಕರ್ಷಕ ಅವಕಾಶಗಳಿವೆ. ಸಂಚಾರ ಸೌಕರ್ಯಕ್ಕೆ ಹೂಡಿಕೆ ಮಾಡಬೇಕೆಂದಿದ್ದರೆ ಅದಕ್ಕೂ ಭಾರತದಲ್ಲಿ ಭರ್ಜರಿ ಅವಕಾಶಗಳಿವೆ. ನಾವೀನ್ಯತೆ (Innovation) ವಲಯದಲ್ಲಿ ಹೂಡಿಕೆ ಮಾಡುವುದಿದ್ದರೆ ಭಾರತ ಪ್ರಶಸ್ತ ಸ್ಥಳವಾಗಿದೆ. ಸುಸ್ಥಿರ ಪರಿಹಾರದಲ್ಲೂ ಹೂಡಿಕೆಗೆ ಭಾರತ ಹೇಳಿ ಮಾಡಿಸಿದ ಸ್ಥಳವಾಗಿದೆ. ಒಂದು ಒಳ್ಳೆಯ ಪ್ರಜಾಪ್ರಭುತ್ವ ವ್ಯವಸ್ಥೆ ಅಡಿಯಲ್ಲೇ ಈ ಎಲ್ಲಾ ಅವಕಾಶಗಳಿವೆ. ವ್ಯವಹಾರ ಸ್ನೇಹಿ ವಾತಾವರಣ ಹಾಗೂ ವಿಶಾಲ ಮಾರುಕಟ್ಟೆ ಇಲ್ಲಿದೆ. ಭಾರತವನ್ನು

ಜಾಗತಿಕ ಹೂಡಿಕೆಗೆ ಆದ್ಯತಾ ಸ್ಥಳವನ್ನಾಗಿ ಮಾಡುವ ನಿಟ್ಟಿನಲ್ಲಿ ಏನು ಕ್ರಮ ಬೇಕಾದರೂ ಕೈಗೊಳ್ಳಲು ಸಿದ್ಧವಿರುವ ಸರ್ಕಾರ ಇಲ್ಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. 

ಕೋವಿಡ್ ಮಹಾಮಾರಿಯಿಂದ ಇಡೀ ವಿಶ್ವವೇ ಕಷ್ಟಕ್ಕೆ ಸಿಲುಕಿದೆ. ಅಭಿವೃದ್ಧಿಯ ಯಂತ್ರಗಳೆಂದು ಕರೆಯಲಾಗುತ್ತಿದ್ದ ನಗರಗಳು ಎಷ್ಟು ದುರ್ಬಲ ಎಂಬುದು ಕೋವಿಡ್ ಸಂಕಷ್ಟದಲ್ಲಿ ಬಹಿರಂಗಗೊಂಡಿದೆ. ಕೋವಿಡ್ ಬಿಕ್ಕಟ್ಟಿನ ನಂತರ ಪುನರ್ನಿರ್ಮಾಣದ ಕೆಲಸ ಆಗಬೇಕಿದೆ. ಆಲೋಚನೆಯ ಲಹರಿಯಲ್ಲಿ ಬದಲಾವಣೆ ಆಗದೇ ಈ ಪುನರ್ನಿರ್ಮಾಣ ಸಾಧ್ಯವಿಲ್ಲ. ಈ ಸಂಕಷ್ಟವು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಪಥಕ್ಕೆ ಅವಕಾಶ ಕೊಟ್ಟಿದೆ. ಈ ಅವಕಾಶವನ್ನು ಬಳಸಿಕೊಂಡು ಭವಿಷ್ಯಕ್ಕಾಗಿ ಪ್ರಬಲ ವ್ಯವಸ್ಥೆ ರೂಪಿಸುವ ಅಗತ್ಯವಿದೆ. ಕೋವಿಡ್ ನಂತರದ ಅವಶ್ಯಕತೆಗಳ ಬಗ್ಗೆ ಜಗತ್ತು ಆಲೋಚಿಸಬೇಕಿದೆ. ನಮ್ಮ ನಗರ ಕೇಂದ್ರಗಳ ಪುನರುಜ್ಜೀವಗೊಳಿಸುವುದರಿಂದ ನಾವು ಈ ಕಾರ್ಯಾರಂಭ ಮಾಡುವುದು ಉತ್ತಮ ಎಂದು ಮೋದಿ ಅಭಿಪ್ರಾಯಪಟ್ಟರು.

ಒಂದು ಸಮಾಜವಾಗಿ ಹಾಗೂ ವ್ಯವಹಾರವಾಗಿ ಜನರೇ ನಮ್ಮ ಅತಿದೊಡ್ಡ ಸಂಪನ್ಮೂಲ ಎಂಬುದು ಕೋವಿಡ್ ಸಂಕಷ್ಟದ ಪರಿಸ್ಥಿತಿ ವೇದ್ಯಗೊಳಿಸಿದೆ. ಇಂಥ ಪ್ರಮುಖ ಮತ್ತು ಮೂಲಭೂತ ಸಂಪನ್ಮೂಲವನ್ನು ಉಳಿಸಿ ಪೋಷಿಸಲು ಅನುವಾಗುವಂತೆ ವಿಶ್ವದ ನವನಿರ್ಮಾಣ ಆಗಬೇಕಿದೆ” ಎಂದರು.

 

ಕಾಮೆಂಟ್‌ಗಳಿಲ್ಲ